		ನಾಸಿಕ್
	ಮಹಾರಾಷ್ಟ್ರದ ಒಂದು ಜಿಲ್ಲೆ ಹಾಗೂ ಅದರ ಆಡಳಿತ ಕೇಂದ್ರ. ಜಿಲ್ಲೆ ಉ.ಅ. 19 53-20 53 ಮತ್ತು ಪೂ.ರೇ. 73 15- 74 56 ನಡುವೆ ಇದೆ. ಜಿಲ್ಲೆಯ ವಿಸ್ತೀರ್ಣ 15.582 ಚ.ಕಿಮೀ. ಜನಸಂಖ್ಯೆ 23,69,221 (1971). ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಗೋದಾವರಿ ಹಾಗೂ ಗಿರನಾ ಇವು ಜಿಲ್ಲೆಯ ಮುಖ್ಯ ನದಿಗಳು. ಸೆಜ್ಜೆ, ಗೋದಿ, ಎಣ್ಣೆಕಾಳು, ಬೇಳೆಗಳು, ಕಬ್ಬು ಹಾಗೂ ಹತ್ತಿ ಇಲ್ಲಿಯ ಮುಖ್ಯ ಕೃಷಿ ಉತ್ಪನ್ನಗಳು. ಇಲ್ಲಿಯ ಕಾಡುಗಳಲ್ಲಿ ಸಾಗುವಾನಿ ಮರಗಳು ಹೇರಳವಾಗಿವೆ. ಬಟ್ಟೆ ನೇಯ್ಗೆ, ಎಣ್ಣೆ ತೆಗೆಯುವುದು, ಪಾತ್ರೆಗಳ ತಯಾರಿಕೆ ಇವು ಜಿಲ್ಲೆಯ  ಮುಖ್ಯ ಉದ್ಯಮಗಳು. ನಾಸಿಕ್, ಮಾಲೆಗಾಂವ್ (1,91,847), ಮನ್‍ಮಾಡ್ (29,572) ಯಿಯೋಲಾ (24,533)- ಇವು ಪ್ರಮುಖ ಪಟ್ಟಣಗಳು. ಇಗತ್‍ಪುರಿ ಮತ್ತು ಮನ್‍ಮಾಡ್‍ಗಳಲ್ಲಿ ರೈಲ್ವೆ ಕಾರ್ಯಾಗಾರಗಳು ಇವೆ.

	ನಾಸಿಕ್ ನಗರ ಪಶ್ಚಿಮ ರೈಲ್ವೆಯ ನಾಸಿಕ್ ರೋಡ್ ರೈಲ್ವೆ ನಿಲ್ದಾಣದಿಂದ ಸು.10 ಕಿಮೀ. ದೂರದಲ್ಲಿದೆ. ಜನಸಂಖ್ಯೆ 1,78,091 (1971). ಗೋದಾವರಿ ನದಿಯ ಇಕ್ಕೆಲಗಳಲ್ಲೂ ಹಬ್ಬಿರುವ ಈ ನಗರಕ್ಕೆ ನವಶಿಖರ ಎಂಬುದರಿಂದ ಈ ಹೆಸರು ಬಂದಿರಬೇಕು. ಒಂಬತ್ತು ಶಿಖರಗಳ ನಡುವೆ ಈ ನಗರ ಇದೆ. ಭಾರತದ ಪಂಚತೀರ್ಥಗಳಲ್ಲಿ ಇದೂ ಒಂದು. ಪಶ್ಚಿಮಕಾಶಿ ಎಂದೂ ಇದು ಪ್ರಸಿದ್ಧವಾಗಿದೆ.

	ಗೋದಾವರಿಯ ದಕ್ಷಿಣದಲ್ಲಿ (ಬಲದಂಡೆ ಮುಖ್ಯ ನಗರಭಾಗ ಇದೆ. ಉತ್ತರದ ಭಾಗದಲ್ಲಿ ಪಂಚವಟಿ ಇದೆ. ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ತಂಗಿದ್ದ ಪಂಚವಟಿ ಇದೇ ಎಂದು ಸ್ಥಳಪುರಾಣ. ಕೃತಯುಗದಲ್ಲಿ ಪದ್ಮನಗರವೆಂದೂ ತ್ರೇತಾಯುಗದಲ್ಲಿ ತ್ರಿಕಂಟಕವೆಂದೂ ದ್ವಾಪರಯುಗದಲ್ಲಿ ಜನಸ್ಥಾನವೆಂದೂ ಕಲಿಯುಗದಲ್ಲಿ ನಾಸಿಕವೆಂದೂ ಇದು ಪ್ರಸಿದ್ಧವಾಗಿದೆಯೆಂದು ಹೇಳಿಕೆ.

	ನಾಸಿಕ್ ಹಾಗೂ ಅದರ ದಕ್ಷಿಣಕ್ಕಿರುವ ಜೋರ್ವೆ, ಚಂದೋಳಿ, ನೆವಾಸ, ದೈಮಾಬಾದ್ ಮುಂತಾದ ಕಡೆಗಳಲ್ಲಿ ಶಿಲಾಯುಗದ ಜನರ ವಸತಿಯ ಅವಶೇಷಗಳು ಸಿಕ್ಕಿವೆ. ನಾಸಿಕದ ನಿವೇಶನದ ಕೆಳಗಿನ ಸ್ಥರದಲ್ಲಿ ಚಕ್ಕೆಕಲ್ಲಿನ ಆಯುಧಗಳ ಜೊತೆ ಜೊತೆಗೇ ಸಣ್ಣಕಲ್ಲಿನ ಆಯುಧಗಳು, ಕೆಂಪು-ಕಪ್ಪು ಬಣ್ಣದ ಮೃತ್ಪಾತ್ರೆಗಳು ತಾಮ್ರ- ಇವು ಕಂಡುಬಂದಿವೆ. ಈ ಸ್ತರದ ಮೇಲೆ ಲೋಹಯುಗದ ವಸತಿಯಿತ್ತೆಂಬುದಕ್ಕೆ ಆಧಾರಗಳಿವೆ. ಔತ್ತರೇಯ ಕಪ್ಪುಗಿಲೀಟಿನ ಮೃತ್ಪಾತ್ರೆಗಳು ಇಲ್ಲಿ ದೊರಕಿರುವ ಅವಶೇಷಗಳಲ್ಲಿ ಮುಖ್ಯವಾದವು. ಸಾತವಾಹನ ಕಾಲದ ತೆಂಗಿನಾಕಾರದ ಒಂದು ಪಾತ್ರೆ, ಗೋಮೇದ ಇತ್ಯಾದಿ ಮಣಿಗಳು, ಪ್ರಾಣಿಗಳ ಹಲ್ಲುಗಳು ಮುಂತಾದವು ಇಲ್ಲಿಯ ಉತ್ಖನನದಲ್ಲಿ ದೊರಕಿವೆ. ಈ ಉತ್ಖನನಗಳನ್ನು ಪುಣೆ ವಿದ್ಯಾಪೀಠ ಹಾಗೂ ಡೆಕ್ಕನ್ ಕಾಲೇಜ್ ರಿಸರ್ಚ್ ಇನ್ಸಿಟ್ಯೂಟ್‍ನವರು ನಡೆಸಿದರು.

	ಕ್ರಿ.ಪೂ. 2ನೆಯ ಶತಮಾನದಿಂದ ಕ್ರಿ.ಶ. 2ನೆಯ ಶತಮಾನದ ವರೆಗಿನ ಅವಧಿಯಲ್ಲಿ ನಾಸಿಕ ಜಿಲ್ಲೆಯ ಪ್ರದೇಶ ಸಾತವಾಹನರ ಆಳ್ವಿಕೆಗೆ ಒಳಪಟ್ಟಿತ್ತು. ನಾಸಿಕದ ಹತ್ತಿರದ ಗುಹೆಗಳಲ್ಲಿ ಆ ಕಾಲದ ಅನೇಕ ಶಾಸನಗಳು ದೊರಕಿವೆ. ಬ್ರಾಹ್ಮೀ ಲಿಪಿಯಲ್ಲಿ ಪ್ರಾಕೃತಭಾಷೆಯಲ್ಲಿರುವ ಈ ಶಾಸನಗಳಿಂದ ಅನೇಕ ಮುಖ್ಯ ಐತಿಹಾಸಿಕ ವಿಚಾರಗಳು ತಿಳಿದುಬರುತ್ತವೆ.

	ಕ್ರಿ.ಶ. 1ನೆಯ ಶತಮಾನದ ಕೊನೆಯ ವೇಳೆಗೆ ಸಾತವಾಹನರ ಪ್ರಾಬಲ್ಯ ಕಡಿಮೆಯಾಯಿತು. ಅನಂತರ ಕ್ಷಹರಾತವಂಶದ ನಹಪಾನನಿಗೆ ಈ ಪ್ರದೇಶ ಸೇರಿ ಹೋಯಿತು. ನಾಸಿಕದಲ್ಲಿರುವ ಹತ್ತನೆಯ ಗುಹೆಯಲ್ಲಿ ನಹಪಾನನ ಅಳಿಯ ಋಷಭದತ್ತನ ಶಾಸನಗಳು ದೊರೆತಿವೆ. ಅಂದಿನ ಪಶ್ಚಿಮ ಭಾರತದ ಇತಿಹಾಸದ ಮೇಲೆ ಈ ಶಾಸನಗಳು ಸಾಕಷ್ಟು ಬೆಳಕು ಬೀರುತ್ತವೆ. ನಾಸಿಕದಲ್ಲಿ ಶ್ರೇಣಿಗಳೆಂಬ ವಣಿಕ ಸಂಘಗಳೂ ನಿಕಾಯಗಳೆಂಬ ವಾಣಿಜ್ಯ ಸಂಸ್ಥೆಗಳೂ ಇದ್ದುವೆಂಬುದು ಈತನ ಶಾಸನಗಳಿಂದ ತಿಳಿದುಬರುತ್ತದೆ. ನಾಸಿಕದ ಹತ್ತಿರ ಈಗ ಗುಹೆಗಳಿರುವ ಗಿರಿಗಳಿಗೆ ತ್ರಿರಶ್ಮಿಪರ್ವತವೆನ್ನುತ್ತಿದ್ದರು. ಮಳೆಗಾಲದಲ್ಲಿ ಇಲ್ಲಿ ವಾಸಮಾಡುತ್ತಿದ್ದ ಭಿಕ್ಷುಗಳಿಗೆ ವಸತಿ ಆಹಾರವಸ್ತ್ರಾದಿಗಳಿಗಾಗಿ ಈತ ದತ್ತಿಗಳನ್ನು ಕೊಟ್ಟಂತೆ ಶಾಸನಗಳಿಂದ ತಿಳಿದುಬರುತ್ತದೆ.

	ಅನಂತರದ ಕಾಲದಲ್ಲಿ ಕ್ಷತರಾತವಂಶದವರಿಂದ ಈ ಪ್ರದೇಶವನ್ನು ಗೌತಮೀಪುತ್ರ ಸಾಕರ್ಣಿ (106-130) ಗೆದ್ದುಕೊಂಡ.

	ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ಗುಹೆಗಳಿವೆ. ಪಾಂಡು ಲೇಣಾ ಗುಹೆಗಳು ಎಂದು ಇವನ್ನು ಸಾಮಾನ್ಯವಾಗಿ ನಿರ್ದೇಶಿಸುತ್ತಾರೆ. ಇವುಗಳಲ್ಲಿ ಚೈತ್ಯ ಮತ್ತು ವಿಹಾರಗಳಿವೆ. ಇವೆಲ್ಲ ಗುಹೆಗಳೂ ಹೀನಯಾನ ಪಂಥಕ್ಕೆ ಸೇರಿದವು. ಎರಡು ಮತ್ತು ಹದಿನೇಳನೆಯ ಗುಹೆಗಳಲ್ಲಿ ಮಹಾಯಾನ ಪಂಥದ ಕೆಲವು ಶಿಲ್ಪಗಳನ್ನು ಅನಂತರ ಸೇರಿಸಲಾಗಿದೆ. ಇಲ್ಲಿ ಬೋಧಿಸತ್ವ, ಪದ್ಮಪಾಣಿ, ಚಕ್ರಪಾಣಿ, ತಾರಾಭಗವತಿ ಮುಂತಾದ ಶಿಲಾಮೂರ್ತಿಗಳಿವೆ. ಏಳನೆಯ ಶತಮಾನದಲ್ಲಿ ಭಾರತಕ್ಕೆ ಬಂದು ನಾಲಂದಾ ವಿಶ್ವವಿದ್ಯಾಲಯದಲ್ಲಿ ಬೌದ್ಧಧರ್ಮವನ್ನು ಅಭ್ಯಾಸಮಾಡಿದ ಹ್ಯೂಯೆನ್ ತ್ಸಾಂಗ್ ನಾಸಿಕಕ್ಕೂ ಬಂದಿದ್ದ. ಆ ಸಮಯದಲ್ಲಿ ಇದು ಬಾದಾಮಿಯ ಚಾಳುಕ್ಯವಂಶದ ಇಮ್ಮಡಿ ಪುಲಕೇಶಿಗೆ ಸೇರಿತ್ತು. ನಾಸಿಕದಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ಕಟ್ಟಿದ್ದ ಮೂರು ಸ್ತೂಪಗಳೂ ನಗರದ ದಕ್ಷಿಣದಲ್ಲಿದ್ದ ಸಂಘಾರಾಮದಲ್ಲಿ ಬೋಧಿಸತ್ತ್ವನ ಶಿಲಾಮೂರ್ತಿಯೂ ಇದ್ದುವೆಂದು ಹ್ಯೂಯೆನ್ ತ್ಸಾಂಗನ ಬರವಣಿಗೆಯಿಂದ ತಿಳಿದುಬರುತ್ತದೆ.
(ಸಿ.ಜಿ.ಪಿ.)

	ನಾಸಿಕ್ ಸಮೀಪದ ಸೀತಾಗುಹೆಯಲ್ಲಿ ಎರಡು ಗುಹೆಗಳಿವೆ. ಒಂದರಲ್ಲಿ ರಾಮ ಲಕ್ಷ್ಮಣ ಸೀತೆಯರ ಮೂರ್ತಿಗಳಿವೆ. ಇನ್ನೊಂದರಲ್ಲಿ  ಪಂಚರತ್ನೇಶ್ವರ ಮಹಾದೇವನ ಲಿಂಗವಿದೆ. ನಾಸಿಕದಿಂದ ಸುಮಾರು 3 ಕಿಮೀ. ದೂರದಲ್ಲಿ ಗೋದಾವರಿಯ ತೀರದಲ್ಲಿ ಗೌತಮ ಋಷಿಯದೆಂದು ಹೇಳಲಾದ ಆಶ್ರಮವಿದೆ. ಗೋದಾವರಿಯ ಉಗಮವಾಗುವುದು ನಾಸಿಕಕ್ಕೆ ಸುಮಾರು 32 ಕಿಮೀ. ದೂರದ ತ್ರ್ಯಂಬಕೇಶ್ವರ ಪರ್ವತದಲ್ಲಿ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಇರುವುದು ಇಲ್ಲಿಯೇ.

	ಇಲ್ಲಿಯ ಅನೇಕ ದೇವಾಲಯಗಳು ಔರಂಗ್‍ಜೇóನ ದಾಳಿಯಲ್ಲಿ ನಾಶವಾದುವೆಂಬುದಾಗಿ ತಾರೀಖೆ ಔರಂಗ್‍ಜೇóಬ್ (1680) ಗ್ರಂಥದಿಂದ ತಿಳಿದುಬರುತ್ತದೆ. ನಾರಾಯಣ, ಉಮಾಮಹೇಶ್ವರ, ರಾಮ, ಕಪಾಲೇಶ್ವರ ಮತ್ತು ಮಹಾಲಕ್ಷ್ಮಿ ಮಂದಿರಗಳು ಅವುಗಳಲ್ಲಿ ಮುಖ್ಯವಾದವು. ಈ ದೇವಾಲಯದ ಸಾಮಗ್ರಿಗಳನ್ನು ಉಪಯೋಗಿಸಿ ಇಲ್ಲಿಯ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ.

	ಈಗ ಇಲ್ಲಿರುವ ಎಲ್ಲ ದೇವಾಲಯಗಳು ಮುಸ್ಲಿಮರ ಆಡಳಿತದ ಕೊನೆಯಲ್ಲಿ ಇಲ್ಲವೆ ಪೇಶ್ವೆಗಳ ಕಾಲದಲ್ಲಿ ಕಟ್ಟಿದವು. ಅವುಗಳ ಪೈಕಿ ಮಾಲೆಗಾಂವಿನ ದೇವಾಲಯವನ್ನು ರಾಜಾ ನಾರೂಶಂಕರ 1747ರಲ್ಲಿ ಕಟ್ಟಿಸಿದ. 2 ಮೀ ಅಗಲ 3 ಮೀ ಉದ್ದದ ಈ ದೇವಾಲಯ ಶಿಲ್ಪದ ದೃಷ್ಟಿಯಿಂದ ಬಲು ಸುಂದರವಾಗಿದೆ. ಈ ದೇವಾಲಯದ ಗಂಟೆಯನ್ನು ಪೋರ್ಚುಗಲ್ಲಿನಲ್ಲಿ ಎರಕ ಹೊಯ್ಸಿ ತರಲಾಯಿತೆಂದು ಹೇಳಲಾಗಿದೆ. 32ಮೀ ಅಗಲ 87 ಮೀ ಉದ್ದದ ಜಗತಿಯ ಮೇಲೆ ನಿರ್ಮಿತವಾಗಿರುವ ರಾಮ್‍ಮಂದಿರ ಇಲ್ಲಿಯ ಇನ್ನೊಂದು ದೊಡ್ಡ ದೇವಾಲಯ. ಇದನ್ನು 1798ರಲ್ಲಿ ಕಟ್ಟಲಾಯಿತು. ಇಲ್ಲಿಯ ಶ್ರೀರಾಮಮೂರ್ತಿ ಕಪ್ಪುಕಲ್ಲಿನದು. ಇವಲ್ಲದೆ ನಾರಾಯಣ (1756) ಮತ್ತು ಭದ್ರಕಾಳಿ (1790) ಮಂದಿರಗಳು ಪ್ರಸಿದ್ಧವಾಗಿವೆ.

	ನಾಸಿಕದ ಉತ್ತರಕ್ಕೆ ಸು. 8 ಕಿಮೀ. ದೂರದಲ್ಲಿ ಗಜಪಂಥ ಬೆಟ್ಟದಲ್ಲಿ ಕೆಲವು ಜೈನಗುಹೆಗಳು ಕಂಡುಬಂದಿವೆ. ಇಲ್ಲಿಯ ಗುಹೆಯೊಂದರಲ್ಲಿ ಪಾಶ್ರ್ವನಾಥನ ಮೂರ್ತಿ ಇದೆ.

	ನಾಸಿಕ್ ಈಗ ಕೈಗಾರಿಕಾ ನಗರವಾಗಿ ಶೀಘ್ರವಾಗಿ ಬೆಳೆಯುತ್ತಿದೆ. ಸಕ್ಕರೆ, ಎಣ್ಣೆ ನೇಯ್ಗೆ, ಪಾತ್ರೆ ತಯಾರಿಕೆ ಮತ್ತು ರೇಷ್ಮೆ ಉದ್ಯಮಗಳು ಹೆಚ್ಚುತ್ತಿವೆ. ನಗರದಲ್ಲಿ ಪುಣೆ ವಿಶ್ವವಿದ್ಯಾಲಯದ ಮನ್ನಣೆ ಪಡೆದ ನಾಲ್ಕು ಕಾಲೇಜುಗಳಿವೆ. ನೋಟು ಹಾಗೂ ಅಂಚೆಚೀಟಿಗಳನ್ನು ಮುದ್ರಿಸುವ ಇಂಡಿಯಾ ಸೆಕ್ಯುರಿಟಿ ಪ್ರೆಸ್ಸು ನಾಸಿಕ್ ರೋಡ್‍ನಲ್ಲಿದೆ.

	ನಾಸಿರ್-ಇ-ಖುಸ್ರು : 1004-1088. ಪರ್ಷಿಯಾದ ಕವಿ, ಪ್ರವಾಸಿ, ಧರ್ಮಪ್ರಚಾರ,. ಷಿಇತ್ ಮನೆತನದ ಈತ ಆಫ್ಘನ್ ತುರ್ಕಿಸ್ಥಾನದ ಬಾಲ್ಖ್ ಬಳಿ ಹುಟ್ಟಿದ ಈತನ ಪೂರ್ಣ ಹೆಸರು ಅಬು ಮುಯಿನಿದ್-ದೀನ-ನಾಸಿರ್-ಇ-ಖುಸ್ರು ಅಲ್ ಕ್ಯುಮದಯಾನಿ ಅಲ್‍ಮರ್‍ವಾಜಿ. ಈತ ಖುರಸಾನ್‍ನಲ್ಲಿ ಸಾಲ್ಝಕ್ ಸರ್ಕಾರದ ಕಂದಾಯದ ಅಧಿಕಾರಿಯಾಗಿದ್ದು 1045ರಲ್ಲಿ ಕೆಲಸಕ್ಕೆ ರಾಜಿನಾಮೆಯಿತ್ತು ಮಕ್ಕಾಯಾತ್ರೆ ಕೈಗೊಂಡ. ಸ್ವಪ್ನದಲ್ಲಿ ಮಕ್ಕಾಯಾತ್ರೆ ಮಾಡು ಎಂದು ದೇವವಾಣಿ ಆದೇಶವಿತ್ತಂತಾಗಲು ಈತನ ಹೃದಯ ಪರಿವರ್ತನೆಯಾಯಿತೆಂದು ಹೇಳುತ್ತಾರೆ. ತುಂಬ ಕುಡುಕನಾಗಿದ್ದ ಈತ ಅಂದಿನಿಂದ ಕುಡಿಯುವುದನ್ನು ಸಂಪೂರ್ಣ ಬಿಟ್ಟು ದೈವಚಿಂತನೆಯ ಕಡೆ ತಿರುಗಿದನಂತೆ. ಸಿರಿಯ, ಜೆರುಸಲಮ್, ಬೆತ್ಲಿಹೆಂ ಮುಂತಾದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ 1047ರಲ್ಲಿ ಮಕ್ಕಾಕ್ಕೆ ಬಂದ. ಅಲ್ಲಿಂದ ಮತ್ತೆ ಜೆರುಸಲಮ್‍ಗೆ ಬಂದು ಭೂಮಾರ್ಗವಾಗಿ ಈಜಿಪ್ಟಿಗೆ ಹೋದ. ಕೈರೋದಲ್ಲಿ ಏಳುವರ್ಷ ಇದ್ದ. ಅಲ್ಲಿನ ಧಾರ್ಮಿಕ ವಾತಾವರಣ, ಕಲೀಫನ ಧರ್ಮಯುಕ್ತವಾದ ರಾಜ್ಯಭಾರ ಈತನಿಗೆ ತುಂಬ ಹಿಡಿಸಿತು. ಅಲ್ಲಿ ಇಸ್ಮೈಲಿ ಧರ್ಮವನ್ನು ಸ್ವೀಕಾರ ಮಾಡಿ ತನ್ನ ಸ್ವದೇಶವಾದ ಖುರಾಸಾನ್‍ನಲ್ಲೂ ಆ ಧರ್ಮ ಪ್ರಚಾರ ಮಾಡಲು ಕಲೀಫನ ಅನುಮತಿ ಪಡೆದ. 1057ರಲ್ಲಿ ಬಾಸ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಹಿಂದಿರುಗಿ ಬಾಲ್ಖ್‍ನಲ್ಲಿದ್ದು ಇಸ್ಮೈಲಿ ಧರ್ಮಪ್ರಚಾರವನ್ನು ತೀವ್ರ ಆಸಕ್ತಿಯಿಂದ ಕೈಗೊಂಡ. ಈ ಕಾಲದಲ್ಲಿ ತುಂಬ ವಿರೋಧವನ್ನು ಎದುರಿಸಬೇಕಾಯಿತು. ಇಸ್ಲಾಮ್ ಧಾರ್ಮಿಕ ಸಂಪ್ರದಾಯಸ್ಥರು ಈತನನ್ನು ದೈವವಿರೋಧಿ, ಕಾಫಿರ ಎಂದು ಘೋಷಿಸಿ ಬಹಿಷ್ಕಾರ ಹಾಕಿದರು. ಪ್ರಾಣಕ್ಕೇ ಆಪತ್ತು ಬರಲಾಗಿ ಈತ ಸಿಯಂಗಾನ್‍ಗೆ ಓಡಿಹೋಗಬೇಕಾಯಿತು. ದೇಶಭ್ರಷ್ಟನಾಗಿ ಸುಮಾರು ಇಪ್ಪತ್ತು ವರ್ಷಕಾಲ ಹಿಂದೂಖುಷ್ ಪರ್ವತಾವಳಿಯ ಬದಕ್ಷನ್‍ಗಿರಿಯಲ್ಲಿ ಕೇವಲ ಕಂದಮೂಲಾದಿಗಳನ್ನು ತಿಂದುಕೊಂಡು ಸಾತ್ವಿಕ ಜೀವನ ನಡೆಸಿ ಈತ ಹಲವಾರು ಗ್ರಂಥಗಳನ್ನು ರಚಿಸಿದ. ಅನೇಕ ಭಕ್ತಿಗೀತೆಗಳನ್ನೂ ಬೋಧಪ್ರದ ಪದ್ಯಗಳನ್ನೂ ಬರೆದ. ಅವೆಲ್ಲ ಬಹುಮಟ್ಟಿಗೆ ದೀರ್ಘಪ್ರಗಾಥಗಳ ಮಾದರಿಯಲ್ಲಿವೆ.

	ಈತನ ಜೀವನದ ಸುತ್ತ ಹಲವಾರು ಕಟ್ಟುಕಥೆ, ದಂತಕಥೆಗಳು ಹುಟ್ಟಿಕೊಂಡು ಆತ್ಮಕಥೆಯಾದ ದಿವಾನ್‍ನಲ್ಲಿ ಸೇರಿಕೊಂಡಿವೆ. ಸಫರ್‍ನಾಮಾ, ದೆವಾನ್ ಎಂಬ ಗದ್ಯಕೃತಿಗಳು, ರೋಷನ್-ಇ-ನಾಮಾ, ಸಾ-ಅದತ್-ನಾಮಾ, ಜಾದುಲ್ ಮುಸಾಫಿರಿನ್ ಎಂಬ ಪದ್ಯಕೃತಿಗಳೂ ಈತನ ಮುಖ್ಯ ಗ್ರಂಥಗಳು. ಇವಲ್ಲದೆ, ಹನ್ನೆರಡು ಇಸ್ಮೈಲಿ ಧಾರ್ಮಿಕ ಸಿದ್ಧಾಂತ ಗ್ರಂಥಗಳನ್ನೂ ಈತ ಬರೆದಿದ್ದಾನೆ. ಅವುಗಳಲ್ಲಿ ತತ್ತ್ವಶಾಸ್ತ್ರ ಮತ್ತು ಮತ ಧರ್ಮಶಾಸ್ತ್ರಗಳ ಸಮನ್ವಯವನ್ನು ಸಾಧಿಸಿರುವ ಜಮಿ ಅಲ್ ಹಿಕ್ಮತೇ ಎಂಬ ಕೃತಿ ಹೆಸರಾದುದು. ಸಫರ್ ನಾಮಾ ಎಂಬ ಪ್ರವಾಸಕಥನ ಪಾರಸಿ ಸಾಹಿತ್ಯದಲ್ಲಿ ಒಂದು ಉತ್ಕøಷ್ಟ ಗದ್ಯಕೃತಿ. ಖುಸ್ರು ತನ್ನ ತೀರ್ಥಯಾತ್ರೆ, ಪ್ರವಾಸ, ಈಜಿಪ್ಟಿನಲ್ಲಿ ಕಳೆದ ಕಾಲ-ಇವುಗಳಲ್ಲಿ ವಿವರಗಳನ್ನೆಲ್ಲ ದಿನಚರಿಯ ರೂಪದಲ್ಲಿ ಬರೆದಿಟ್ಟಿದ್ದಾನೆ. ಹೀಗಾಗಿ ಈ ಕೃತಿ ಸಮಕಾಲೀನ ಜೀವನದ ಅತ್ಯುತ್ತಮ ದಾಖಲೆ ಎನಿಸಿದೆ. ಅಲ್‍ಮುಸ್ತಾನ್ಸಿರ್ ಕಲೀಫನ ವೈಭವಯುತ ರಾಜ್ಯದ ಶ್ರೇಷ್ಠ ಆಡಳಿತದ ವರ್ಣನೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಖುಸ್ರುವಿನದು ಸರಳವಾದ ವೀರ್ಯವತ್ತಾದ ಗದ್ಯಶೈಲಿ. ಈತನ ಶಬ್ದಸಂಪತ್ತು ಅಸಾಧಾರಣವಾದುದು. ಪದ್ಯಗಳು ಛಂದೋವೈವಿದ್ಯದಿಂದಲೂ ತಂತ್ರಸಿದ್ದಿಯಿಂದಲೂ ಕೂಡಿವೆ. `ಕುರಾನಿನ ಗಿಳಿಪಾಠದಿಂದ ಏನೂ ಪ್ರಯೋಜನವಿಲ್ಲ. ಜ್ಞಾನರಹಿತವಾದ ಸಾತ್ವಿಕತೆ ಏನನ್ನೂ ಸಾಧಿಸದು. ಜ್ಞಾನ ಧರ್ಮದ ಸೇವಕ ಮಾತ್ರ. ಧರ್ಮ ವಿಶ್ವಜೀವನದ ಪರಿಮಳ. ಈ ಜಗತ್ತು ಈಶ್ವರನ ಪಡಿನೆಳಲು (ಪ್ರತಿಬಿಂಬ). ಮನುಷ್ಯ ವಿಶ್ವದ ಅಣುರೂಪ. ವಿಧಿಯ ಶಾಸನಕ್ಕಿಂತಲೂ ಆತ್ಮಶಕ್ತಿ ಅಥವಾ ಇಚ್ಛಾಶಕ್ತಿ ದೊಡ್ಡದು. ಆತ್ಮವೇ ಪುಸ್ತಕ. ಕರ್ಮವೇ ಬರೆಹ. ನಿನ್ನದೇ ಕೈ. ನಿನ್ನದೇ ಇಚ್ಛೆ. ಆದುದರಿಂದ ಸತ್ಕರ್ಮ ವಿನಾ ಬೇರೆ ಏನನ್ನೂ ಬರೆಯಬೇಡ- ಇವು ಖುಸ್ರುವಿನ ಕೆಲವು ಅಮೂಲ್ಯ ವಿಚಾರಗಳು.

	ಅತ್ಯುತ್ತಮ ಧಾರ್ಮಿಕ ಕಾವ್ಯಗಳನ್ನು ರಚಿಸಿರುವ ಈತ ಫಿರ್ದೂಸಿ, ಜಾಮಿ ಇವರ ಪಂಕ್ತಿಯಲ್ಲಿ ನಿಲ್ಲುವ ಶ್ರೇಷ್ಠ ಕವಿ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ